ಭಾಗಮಂಡಲ
	ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಒಂದು ಗ್ರಾಮ ಮತ್ತು ಹೋಬಳಿ ಕೇಂದ್ರ. ಭಂಗಡೇಶ್ವರನೆಂಬ ಮುನಿ ಇಲ್ಲಿ ತಪಸ್ಸು ಮಾಡುತ್ತಿದ್ದುದರಿಂದ ಈ ಹೆಸರು ಬಂದಿದೆ ಎಂಬುದು ಐತಿಹ್ಯ. ಮಡಿಕೇರಿಗೆ ಪಶ್ಚಿಮದಲ್ಲಿ 40 ಕಿಮೀ ದೂರದಲ್ಲಿ ಕಾವೇರಿನದಿಯ ದಡದಲಿದ್ಲೆ. ಕಾವೇರಿಯ ಉಗಮಸ್ಥಾನ ತಲಕಾವೇರಿ ಭಾಗಮಂಡಲದಿಂದ ಸುಮಾರು 6 ಕಿಮೀ ದೂರದಲ್ಲಿದೆ. ಸುತ್ತಲೂ ದಟ್ಟ ಅರಣ್ಯವಿದ್ದು ಪ್ರಕೃತಿಸೌಂದರ್ಯದಿಂದ ಶೋಭಿಸುತ್ತಿದೆ. ಜನಸಂಖ್ಯೆ 2,149 (2001). ಇಲ್ಲಿ ಜೇನುಸಾಕಣೆ ಮತ್ತು ತರಬೇತಿ ಕೇಂದ್ರವಿದೆ.

	ಬ್ರಹ್ಮಗಿರಿಯಲ್ಲಿ ಉಗಮಿಸಿ ಹರಿದುಬರುವ ಕನ್ನಿಕೆ, ಕಾವೇರಿ ನದಿಗಳು ಭಾಗಮಂಡಲದಲ್ಲಿ ಸಂಗವಿಸುತ್ತವೆ. ಅಲ್ಲದೆ ಸುಜ್ಯೋತಿ ಎಂಬ ಗುಪ್ತಗಾಮಿನಿಯೂ ಇಲ್ಲಿ ಸೇರುವುದೆಂಬ ನಂಬಿಕೆಯಿದ್ದು ಇದು ತ್ರಿವೇಣೀ ಸಂಗಮವೆಂದು ಪರಿಗಣಿತವಾಗಿದೆ. ಕೊಡಗಿನ ಜನ ಬಹುಸಂಖ್ಯೆಯಲ್ಲಿ ಇಲ್ಲಿ ಪರ್ವ ದಿನಗಳಂದು ಸೇರುತ್ತಾರೆ.

	ಇಲ್ಲಿರುವ ಭಗಂಡೇಶ್ವರ ದೇವಾಲಯದಲ್ಲಿ ತಮಿಳು ಭಾಷೆ ಮತ್ತು ಗ್ರಂಥ ಲಿಪಿಯಲ್ಲಿರುವ ಒಂದು ಶಾಸನವಿದೆ. 1785-90 ಅವಧಿಯಲ್ಲಿ ಟಿಪ್ಪುಸುಲ್ತಾನ ಈ ದೇವಾಲಯವನ್ನು ಕೋಟೆಯಾಗಿ ಪರಿವರ್ತಿಸಿ ಇಲ್ಲೊಂದು ಸೈನ್ಯ ಇಟ್ಟಿದ್ದ. ಭಾಗಮಂಡಲವನ್ನು ಅಫಜಲಾಬಾದ್ ಎಂದು ಹೆಸರಿಸಿದ್ದ. 1790ರಲ್ಲಿ ಕೊಡಗಿನ ದೊಡ್ಡವೀರರಾಜೇಂದ್ರ ಭಾಗಮಂಡಲವನ್ನು ಗೆದ್ದುಕೊಂಡ. ಯುದ್ಧಕಾಲದಲ್ಲಿ ನಾಶವಾದ ದೇವಾಲಯದ ಮೂರು ತ್ರಾಮದ ಚಾವಣಿಗಳ ಬದಲಾಗಿ ದೊರೆ ನಾಲ್ಕು ಬೆಳ್ಳಿಯ ಹಂಚುಗಳನ್ನು ಹೊದಿಸಿದನಂತೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ